ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ : ಅನಿಲ್ ಕುಮಾರ್ ಎಸ್. ಭೂಮ್ ರಡ್ಡಿ
ಅಕ್ಷಯ ಪದವಿ ಕಾಲೇಜಿನಲ್ಲಿ ‘ದೃಷ್ಟಿ 2K26’ ಕಾರ್ಯಕ್ರಮ
ಪುತ್ತೂರು: ವಿದ್ಯಾರ್ಥಿಗಳು ಶಿಕ್ಷಣ, ಕುಟುಂಬ ಹಾಗೂ ಭವಿಷ್ಯದ ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ, ಉತ್ತಮ
ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿ ಪ್ರಜೆಗಳಾಗಿ ಬೆಳೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಎಸ್. ಭೂಮ್ ರಡ್ಡಿ ಹೇಳಿದರು.
ಅವರು ಅಕ್ಷಯ ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ‘ದೃಷ್ಟಿ 2K26’ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ
ಮೂಲಕ ಉದ್ಘಾಟಿಸಿ ಮಾತನಾಡಿದರು.
“ಹದಿಹರೆಯದಲ್ಲಿ ಪ್ರೀತಿ, ಕಾಮ, ದ್ವೇಷದಂತಹ ಭಾವನೆಗಳು ಬಹುಬೇಗ ಪ್ರಭಾವ ಬೀರುತ್ತವೆ. ಕ್ಷಣಿಕ ಸುಖಕ್ಕಾಗಿ
ಜೀವನಪೂರ್ತಿ ಕೊರಗುವಂತಹ ಪರಿಸ್ಥಿತಿ ಎದುರಾಗಬಹುದು ಎಂಬ ಅರಿವು ಯುವಜನತೆಯಲ್ಲಿ ಇರಬೇಕು. ಯಾವುದೇ
ತೊಂದರೆ ಎದುರಾದಾಗ ಅದನ್ನು ಮನೆಯವರೊಂದಿಗೆ ಹಂಚಿಕೊಳ್ಳಬೇಕು ಹಾಗೂ ಅಗತ್ಯವಿದ್ದಲ್ಲಿ ಕಾನೂನಿನ ಸಲಹೆ
ಪಡೆಯಬೇಕು. ತಪ್ಪು ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು.
ಪೋಷಕರು ಮಕ್ಕಳ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಅವರ ನಡೆ-ನುಡಿಗಳ ಮೇಲೂ ಗಮನಹರಿಸಬೇಕು” ಎಂದು
ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್
ನಡುಬೈಲು ಮಾತನಾಡಿ, “ಅಕ್ಷಯ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ
ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಅನೇಕ ಕುಟುಂಬಗಳಿಗೆ ಬದುಕಿನ ಆಧಾರವಾಗಿದೆ. ವಿದ್ಯಾರ್ಥಿಗಳು
ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸನ್ನಿವೇಶದಿಂದ ಪಾಠ ಕಲಿತು, ಒಳ್ಳೆಯದನ್ನೇ ಆಯ್ಕೆ ಮಾಡಿಕೊಂಡು
ಮುನ್ನಡೆಯಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ‘ಅನ್ವೇಷಣಾ 3’ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ
ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಕಾಲೇಜಿನ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗಳ
ಕುರಿತು ಮಾಹಿತಿ ನೀಡಿದರು. ಅಕ್ಷಯ ಕಾಲೇಜಿನ ಶೈಕ್ಷಣಿಕ ನಿರ್ದೇಶಕರು ಹಾಗೂ ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲ ಅಭಿಲಾಷ್ ಕ್ಷತ್ರಿಯ ಸಂಸ್ಥೆಯಲ್ಲಿ ಲಭ್ಯವಿರುವ ವೃತ್ತಿಪರ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಕುರಿತು
ಮಾಹಿತಿ ನೀಡಿದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಕಾರ್ಯದರ್ಶಿ ಅಕ್ಷಯ್
ಉಪಸ್ಥಿತರಿದ್ದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಹರಿಶ್ಚಂದ್ರ ಸಿ. ಅತಿಥಿಗಳ ಪರಿಚಯ ಮಾಡಿದರು. ಬಿ.ಎಚ್.ಎಸ್. ವಿಭಾಗದ
ಮುಖ್ಯಸ್ಥ ಅವಿನಾಶ್ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ರಶ್ಮಿತಾ ಎಸ್. ಕಾರ್ಯಕ್ರಮ ನಿರೂಪಿಸಿದರು.



